ಊನೈಕೆ, ರೂಪುಗೆಡಿಕೆ
	ದೇಹದ ಯಾವುದಾದರೊಂದು ಅಂಗವನ್ನು, ಅಂಗಭಾಗವನ್ನು ತೆಗೆದುಹಾಕುವುದನ್ನು ಊನೈಕೆಯೆಂದೂ (ಮ್ಯೂಟಿಲೇಷನ್) ಒಟ್ಟಾರೆ ಆಕಾರವನ್ನು ಕೆಡಿಸುವ ಕ್ರಿಯೆಯನ್ನು ರೂಪುಗೆಡಿಕೆಯೆಂದೂ (ಡಿಫಾರ್ಮೇಷನ್) ಕರೆಯಬಹುದು. ಇಂಥವು ಜೀವನದಲ್ಲಿ ಆಕಸ್ಮಾತ್ತಾಗಿ ಆಗುವುದೂ ಉಂಟು. ಇಲ್ಲವೇ ಉದ್ದೇಶಪೂರ್ವಕವಾಗಿ ಈ ಕ್ರಿಯೆಗಳನ್ನು ದೇಹದ ಮೇಲೆ ಪ್ರಯೋಗಿಸುವುದೂ ಉಂಟು. ಇರಿತ, ಕೊಯ್ತ, ಕತ್ತರಿಸುವಿಕೆ, ತೂತುಮಾಡುವುದು, ಬರೆಹಾಕುವುದು, ತರಚುವುದು, ಅಂಟಿಸಿ ಹೊಲಿಯುವುದು, ಹೊರ ವಸ್ತುಗಳನ್ನು ಒಳ ತೂರುವುದು, ಅಮುಕುವುದು, ಕಿವುಚುವುದು, ಉಬ್ಬಿಸುವುದು, ಸೀಳಿ ಅಗಲಿಸುವುದು, ದೊಡ್ಡದಾಗಿಸುವುದು, ರಂಗು ಬಳಿಯುವುದು-ಇವು ಊನೈಕೆ ಮತ್ತು ರೂಪುಗೆಡಿಕೆಯ ಕೆಲವು ವಿಧಗಳು.

	ಮೇಲೆ ತಿಳಿಸಿರುವಂತೆ ಇಂಥ ಸೊಟ್ಟು ಡೊಂಕುಗಳು ಆಕಸ್ಮಾತ್ತಾಗಿ ಆಗಬಹುದು. ಇಲ್ಲವೇ ದಿನನಿತ್ಯದ ನಡವಳಿಕೆಗಳಿಂದಲೂ ಆಗಬಹುದು. ಬಹು ಬಿಗಿಯಾದ ಬೂಟುಗಳನ್ನು ಹಾಕುವುದರಿಂದ ಪಾದಗಳು ಸಣ್ಣಗೂ ಸೊಟ್ಟಗೂ ಆಗುತ್ತವೆ. ಎಷ್ಟೋ ವೇಳೆ ಬೂಟುಗಳನ್ನು ಹಾಕದಿರುವುದರಿಂದಲೂ ಹೀಗಾಗುತ್ತದೆ. ತೊಟ್ಟಿಲು, ಜೋಳಿಗೆ, ತಲೆದಿಂಬುಗಳ ವಿಕಾರಗಳಿಂದ ಮಕ್ಕಳ ಹಿಂದಲೆ ಡೊಂಕಾಗಿರುವುದನ್ನು ಕಾಣಬಹುದು. ನೆಲದಲ್ಲಿ ಚಪ್ಪಾಳೆ ಹಾಕಿ ಕೂಡುವವರ ಅನೇಕ ಕೀಲು ಸವೆಯುತ್ತವೆ. ಹೆಚ್ಚಾಗಿ ಕುದುರೆ ಸವಾರಿಯನ್ನು ಮಾಡುವವರ ಕಾಲುಗಳು ಕಮಾನಿನಂತೆ ಬಾಗಿ ಬಿಡುತ್ತವೆ. ಮೂಟೆ ಹೊರುವವನ ಬೆನ್ನಿನ ಸ್ನಾಯುಗಳು, ಸೌದೆ ಒಡೆವವನ ಅಂಗೈಗಳು ದದ್ದುಗಟ್ಟುತ್ತವೆ. ಕೂತು ಓದುವವನ ಬೆನ್ನು ಬಾಗಿ ಹೋಗುತ್ತದೆ. ಇನ್ನು ಮತೀಯ ಸಂಪ್ರದಾಯದಂತೆ ಕೆಲವರು ಮುಡಿ ಕೊಡುತ್ತಾರೆ. ಕೆಲವರು ಉಗುರು ಬೆಳೆಸುತ್ತಾರೆ. ಮತ್ತೆ ಕೆಲವರು ಹರಕೆಗೆಂದು ಬಾಯಿ ಬೀಗ ಹಾಕಿಕೊಳ್ಳುತ್ತಾರೆ. ಇನ್ನೂ ಕೆಲವು ಜನರಲ್ಲಿ ತಮ್ಮ ತಂಡದ ಗುರುತುಗಳನ್ನು ಮುದ್ರೆಯ ರೂಪದಲ್ಲಿ ಮೈಮೇಲೆ ಒತ್ತಿಕೊಳ್ಳುವ ಪದ್ಧತಿ ಇದೆ. ವೈಧವ್ಯ, ಹೇಡಿತನ, ದಂಡನೆಗಳಿಗಾಗಿ ತಲೆ ಬೋಳಿಸುವ, ಕಿವಿ ಕೊಯ್ಯುವ, ಬಣ್ಣ ಬಳಿಯುವ, ಊನಮಾಡಿ ರೂಪುಗೆಡಿಸುವ ವಿಧಾನಗಳು ಹಿಂದಿನಿಂದ ಬಳಕೆಯಲ್ಲಿವೆ.

	ದಂಡನೆ ಅಥವಾ ಶಾಸ್ತ್ರವಿಧಿಯಾಗಿ ಊನೈಕೆ ಮತ್ತು ರೂಪುಗೆಡಿಕೆಯ ಕ್ರಮಗಳನ್ನು ಬಳಸುತ್ತಿದ್ದುದರ ಜೊತೆಗೆ ಅವನ್ನು ಸುರೂಪವನ್ನು ಪಡೆಯಲೂ ಬಳಸುತ್ತಿದ್ದರೆಂದು ಹೇಳಬಹುದು. ಆದಿವಾಸಿಗಳಿಂದ ಹಿಡಿದು ಇಪ್ಪತ್ತನೆಯ ಶತಮಾನದವರೆಗೆ ವಿವಿಧ ದೇಶಗಳ ಜನ ಬಳಸುತ್ತಿದ್ದ ವಿಧಾನಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಸ್ಥೂಲವಾಗಿ ಹೇಳಿದೆ.

	ಆಫ್ರಿಕದ ಹಲವು ತಂಡಗಳಲ್ಲಿ ಮೈನೆರೆದ ಹುಡುಗಿಯರಿಗೆ ಕೆಲವು ದಿನಗಳ ಕಾಲ ವಿಶಿಷ್ಟ ಸ್ನಿಗ್ಧಾಹಾರಗಳನ್ನು ಕೊಟ್ಟು ಅವರ ದೇಹ ಕೊಬ್ಬಿ ಉಬ್ಬುವಂತೆ ಮಾಡುತ್ತಿದ್ದರು. ಇದು ಒಟ್ಟಾರೆ ದೇಹಕ್ಕೆ ಸಂಬಂಧಿಸಿದ ವಿಷಯ. ಪೂರ್ವ ದೇಶಗಳಲ್ಲಿ ಅರಮನೆಗಳಲ್ಲೂ ಇಂಥ ಪದ್ಧತಿ ಇತ್ತು. ಹಚ್ಚೆ ಹೊಯ್ಯುವುದರಿಂದ ಗಾಯಗೊಳಿಸಿ ಕಲೆಗಟ್ಟಿಸುವುದರಿಂದ ಚರ್ಮದ ಊನೈಕೆ ಆಗುತ್ತದೆ.

	ಹಚ್ಚೆ ಹೊಯ್ಯುವಾಗ ಚರ್ಮದಡಿಯಲ್ಲಿ ಬಣ್ಣ ಸೇರುತ್ತದೆ. ಸಾಮಾನ್ಯವಾಗಿ ಅಲಂಕಾರಕ್ಕಾಗಿ ಕಲೆಗಟ್ಟಿಸಿ ಕಲೆಗಂತಿ (ಕೀಕಲಾಯ್ಡ್) ಎಬ್ಬಿಸುವುದೂ ಉಂಟು. ಹೆಚ್ಚು ಹೊಯ್ದರೆ ಕರಿಯ ಚರ್ಮಗಳಲ್ಲಿ ಎದ್ದು ಕಾಣದ್ದರಿಂದ, ಆಫ್ರಿಕ, ಆಸ್ಟ್ರೇಲಿಯ, ನ್ಯೂಗಿನಿ, ಟಾಸ್ಮೇನಿಯಗಳ ಆದಿವಾಸಿಗಳಲ್ಲಿ ಕಲೆಗಟ್ಟಿಸುವುದೇ ವಾಡಿಕೆ. ಚರ್ಮವನ್ನು ಕೊಯ್ದು ಗಾಯ ಮಾಯಲು ಬಿಡದಂತೆ ಕೆರಳುವ ವಸ್ತುವನ್ನು ಹುದುಗಿಸಿಟ್ಟು ಗಾಯದಕಲೆ ಇನ್ನೂ ಜೋರಾಗುವಂತೆ ಮಾಡುವರು. ಕೆಲವೇಳೆ ಇದಕ್ಕಾಗಿಯೂ ಯಾವ ಕಾಯಿಲೆಯೂ ತಟ್ಟದಂತೆ ತಡೆಯಲೂ ಸೆಳವು ಬಾರದಂತೆ ಮಾಡಲೂ ಬರೆ ಹಾಕುವುದುಂಟು. ಚರ್ಮದಡಿಯಲ್ಲಿ ವಸ್ತುಗಳನ್ನು ಇಡುವುದು ಇನ್ನೊಂದು ವಿಧಾನ. ದಕ್ಷಿಣ ಆಫ್ರಿಕ ಗಣಿ ಕೆಲಸಗಾರರು ವಜ್ರಗಳನ್ನು ಕದ್ದು ಸಾಗಿಸುವುದು ಹೀಗೇ. ಯುನಾನಿನಲ್ಲಿ ಒಡವೆಗಳನ್ನು ಹೀಗೆ ಎದೆ, ಕೊರಳುಗಳ ಚರ್ಮದಲ್ಲಿ ಪಯಣಿಗರು ಬಚ್ಚಿಡುವರಂತೆ. ಬರ್ಮೀಯರು ಬಗೆಬಗೆಯ ಮಾಯಾ ತಾಯಿತಿಗಳನ್ನು ಚರ್ಮದಡಿಯಲ್ಲಿ ಇಟ್ಟುಕೊಳ್ಳುವರು.

	ಕೂದಲು ಅಷ್ಟಾಗಿ ಬೆಳೆಯದ ಜನರಲ್ಲಿ, ಮೊಗದ ಮತ್ತು ಮೈಮೇಲಿನ ಕೂದಲನ್ನು ಕಿತ್ತು ಹಾಕುವರು. ಮಂಗೋಲಿಯನ್ ಕುಲದ ಗಂಡಸರು ತಮ್ಮ ಗಡ್ಡದ ಕೂದಲನ್ನು ಚಿಮುಟ, ಜೋಡಿ ಕಪ್ಪೆ ಚಿಪ್ಪುಗಳು ಇಲ್ಲವೇ ನಾಣ್ಯಗಳಿಂದ ಆಗಾಗ್ಗೆ ತೆಗೆಯುತ್ತಿರುವರು. ಈಗಿನ ಕಾಲದ ಹೆಂಗಸರು ರಾಸಾಯನಿಕ ಮತ್ತಿತರ ವಿಧಾನಗಳಿಂದ ಕೂದಲನ್ನು ತೆಗೆಯುವುದೂ ಊನಯಿಕೆಯೆ. ಕೆಲವರು ಯಾವಾಗಲೂ ಒಂದೇ ಕಡೆಯಲ್ಲಿ ಬೈತಲೆ ತೆಗೆದು ಕೂದಲು ಬೆಳೆವ ದಿಕ್ಕನೇ ಬದಲಿಸುವುದೂ ಒಂದು ರೀತಿಯ ರೂಪುಗೆಡಿಕೆ.

	ಪುರಾತನರು ತಲೆಯ ಸಹಜ ಮಾಟವನ್ನು ತಿದ್ದುತ್ತಿದ್ದುದೂ ಗೊತ್ತಾಗಿದೆ. ತಲೆಗೆ ಬಿಗಿಸಿದ ಪಟ್ಟಿಗಳಿಂದ ತಲೆಗಳು ಕೊಳವೆ ಆಕಾರ ಪಡೆಯುತ್ತಿದ್ದವು. ಆಸ್ಟ್ರೇಲಿಯ, ಓಪಿಯೇನಿಯಗಳನ್ನು ಬಿಟ್ಟರೆ, ಉಳಿದ ಎಲ್ಲ ಖಂಡಗಳಲ್ಲೂ ತಲೆಯ ಸೊಟ್ಟುಗಳು ವಾಡಿಕೆಯಾಗಿದ್ದವು. ಸಹರ ಕೆಳಗಿನ ಆಫ್ರಿಕ, ದಕ್ಷಿಣ ಭಾರತ, ಉತ್ತರ ಅಮೆರಿಕ, ಉತ್ತರ ಯೂರೇಷ್ಯಗಳಲ್ಲಿ ಮಾತ್ರ ಅಷ್ಟಾಗಿಲ್ಲ. ಫ್ರಾನ್ಸ್, ಇಂಡೋನೇಷ್ಯ, ಬಡಗಣ ಆಫ್ರಿಕಗಳಲ್ಲಿ ಇದು ಈಗಲೂ ರೂಢಿಯಲ್ಲಿದೆ.

	ದಕ್ಷಿಣ ಅಮೆರಿಕದ ಆದಿವಾಸಿಗಳು, ಮಲೇಷಿಯನ್ನರು ಭಾರತ ಮತ್ತು ಆಫ್ರಿಕದವರು, ಒಡವೆ ವಸ್ತು ತೊಡಲು ಮೂಗನ್ನೂ ಮೂಗು ಕಂಬವನ್ನೂ ತೂತಿಡುವುದು ಸಾಮಾನ್ಯ. ಹಿಂದಿನ ಕಾಲದಲ್ಲಿ ಎಷ್ಟೋ ಕಡೆ, ಹಾದರ ಮಾಡಿದವರ ಮೂಗನ್ನು ದಂಡನೆಯಾಗಿ ಕತ್ತರಿಸಿ ಹಾಕುತ್ತಿದ್ದರು. ಇಂದಿನ ಪ್ಲಾಸ್ಟಿಕ್ ಶಸ್ತ್ರವೈದ್ಯದಲ್ಲಿ ಮೂಗನ್ನು ಚೆನ್ನಾಗಿ ಕಾಣಬೇಕೆಂದು ಊನಗೊಳಿಸುವುದುಂಟು.

	ಆಫ್ರಿಕ, ದಕ್ಷಿಣ ಅಮೆರಿಕದ ಆದಿವಾಸಿಗಳಲ್ಲಿ ಅಲಂಕಾರದ ಓಲೆಯನ್ನೋ ಬೇರೆ ಒಡವೆಯನ್ನೋ ಇಡಲು ಕೆಳದುಟಿಗೆ ತೂತಿಟ್ಟುಕೊಳ್ಳುತ್ತಿದ್ದರು. ಎಸ್ಕಿಮೋಗಳಲ್ಲೂ ಈ ಪದ್ಧತಿ ಇತ್ತು. ಇದರ ಚೆನ್ನಾದ ಮಾದರಿ ಮಧ್ಯ ಆಫ್ರಿಕದ ಸಾರಾ ತಂಡದ ಹೆಂಗಸರಲ್ಲಿ ಕಾಣುವುದು. ತುಟಿಗಳನ್ನು ಕಟವಾಯಿಗಳನ್ನು ಹರಿದು ಮೇಲ್ದುಟಿಯನ್ನು ಸುಮಾರು ಏಳಂಗುಲಗಳ ವ್ಯಾಸದ ತಟ್ಟೆಗಳ ನಡುವೆ ಅಮುಕಿಟ್ಟು ಹಿಗ್ಗಲಿಸುವರು. ಕೆಲವೇಳೆ, ಕೆಳದುಟಿಯನ್ನು 9-10 ಅಂಗುಲಗಳ ಅಗಲಕ್ಕೂ ಹಿಗ್ಗಿಸುವುದುಂಟು. ಕೆನ್ನೆಗಳಲ್ಲಿ ಒಡವೆ ತೊಟ್ಟುಕೊಳ್ಳಲು ತೂತಿಡುವುದು ಸಾಮಾನ್ಯವಲ್ಲ.

	ಪುರಾತನ ಪೆರು, ಆಸ್ಟ್ರೇಲಿಯದ ಅನಾಗರಿಕರು, ಆಫ್ರಿಕದ ಕೆಲವು ತಂಡಗಳು, ಮಲೇಷಿಯ ಮತ್ತು ಇತರೆಡೆಗಳಲ್ಲಿ ಒಂದು ಅಥವಾ ಅನೇಕ ಬಾಚಿ ಹಲ್ಲುಗಳನ್ನು ತೆಗೆದು ಹಾಕುತ್ತಾರೆ. ಆಫ್ರಿಕದಲ್ಲಿ ಮುರಿದೋ ಪುರಾತನ ಮೆಕ್ಸಿಕೋ, ಮಧ್ಯ ಅಮೆರಿಕಗಳಲ್ಲಿ ಉಜ್ಜಿ ಹಾಕೋ ಹಲ್ಲುಗಳನ್ನು ಅಲಂಕರಿಸುವುದು ವಾಡಿಕೆಯಾಗಿತ್ತು. ಇಂಡೋನೇಷ್ಯದಲ್ಲಿ ಹಲ್ಲುಗಳ ಮೇಲೆ ಚಿತ್ರ ಕೊರೆಯುವುದುಂಟು. ಬೆಲೆಯಾದ ಕಲ್ಲುಗಳಿಂದಲೋ ಚಿನ್ನದಿಂದಲೋ ಹಲ್ಲು ತುಂಬಿಸುವುದು. ಟೋಪಿ ಕಟ್ಟಿಸುವುದು, ರಿಪೇರಿ ಮಾಡಿಸುವುದು ಈಗಿನ ವಾಡಿಕೆ. ಭಾರತದಲ್ಲಿ ಕೆಲವೆಡೆ ಹಲ್ಲುಗಳ ನಡುವೆ ಗೂಟವನ್ನು ಇರಿಸುವರು. ದಕ್ಷಿಣ ಭಾರತ, ಬರ್ಮ, ಕೆಲವು ಮಲೇಷಿಯ ತಂಡಗಳಲ್ಲಿ ಹಲ್ಲಿಗೆ ಕಪ್ಪು ಹಚ್ಚುವರು. 

	ಪುರಾತನ ಆಜ್ಪೆಕ್, ಮಾಯ ಆದಿವಾಸಿಗಳು ಮುಡುಪಾಗಿ ನಾಲಗೆಯಲ್ಲಿ ಮುಳ್ಳುಗಳನ್ನು ಚುಚ್ಚಿಕೊಳ್ಳುತ್ತಿದ್ದರು. ಆಸ್ಟ್ರೇಲಿಯ ಕೆಲವು ತಂಡಗಳಲ್ಲಿ ದೀಕ್ಷೆ ಬಿಡಿಸುವಾಗ ನಾಲಗೆ ಕೆಳಗೆ ಕೊಯ್ದು ರಕ್ತ ಕಾರಿಸುತ್ತಿದ್ದರು. ಯುರೋಪು, ಆಫ್ರಿಕಗಳಲ್ಲಿ ಹಿಂದಿನ ಕಾಲದಲ್ಲಿ ದಂಡನೆಯಾಗಿ ನಾಲಗೆಯನ್ನೇ ಕೊಯ್ದು ಹಾಕುತ್ತಿದ್ದರು. 

	ಪುರಾತನ ಮಾಯ ಆದಿವಾಸಿಗಳು ಮೆಳ್ಳೆಗಣ್ಣೇ ಚೆಂದವೆಂದೆನಿಸಿ, ಹಸುಗೂಸಿನ ಕಣ್ಣುಗಳ ನಡುವೆ ಬೊಂಬೆಯನ್ನು ನೇತುಹಾಕುತ್ತಿದ್ದರು. 1950ರ ಸುಮಾರಿನಲ್ಲಿ ಕಕೇಷಿಯನ್ನರಂತೆ ಕಾಣಬೇಕೆಂಬ ಗೀಳಿಂದ ಜಪಾನಿನ ಜನ ಒಳಕುಡಿಗಣ್ಣಿನ ಪೊರೆಯನ್ನು ತೆಗೆಸಿಕೊಳ್ಳುತ್ತಿದ್ದರು. ದಂಡನೆಯಾಗಿ ಕಣ್ಣು ಕುರುಡು ಮಾಡುವುದು ಪೂರ್ವಕಾಲದಿಂದಲೂ ಗೊತ್ತಿದೆ.

	ಒಡವೆ ಇಟ್ಟುಕೊಳ್ಳಲು ಕಿವಿಚುಚ್ಚಿಸಿಕೊಳ್ಳುವುದು ಪ್ರಪಂಚದಲ್ಲಿ ಎಲ್ಲೆಲ್ಲೂ ರೂಢಿಯಲ್ಲಿದೆ. ಕೆಲವೆಡೆಗಳಲ್ಲಂತೂ ಭಾರವಾದ ಒಡವೆ ಹಾಕಿ ಜಗ್ಗಿಸಿ ಹಿಗ್ಗಿಸುವುದುಂಟು. ಮುಸ್ಲಿಂ ಹೆಂಗಸರಲ್ಲಿರುವಂತೆ ಕಿವಿಯ ಅಂಚಿನಲ್ಲಿ ತೂತಿಡುವುದು ಅಷ್ಟು ಸಾಮಾನ್ಯವಲ್ಲ. ಹಾದರದ ದಂಡನೆಯಾಗಿ ಕಿವಿಗಳನ್ನು ಕೊಯ್ದು ಹಾಕುವುದೂ ವಾಡಿಕೆಯಲ್ಲಿತ್ತು.

	ಹಿತ್ತಾಳೆ ಸುರುಳಿ ಬಳೆಗಳನ್ನು ಕೊರಳಿಗೇರಿಸಿಕೊಂಡು ಸುಮಾರು ಒಂದೂವರೆ ಅಡಿ ಎತ್ತರಕ್ಕೆ ಕೊರಳನ್ನು ಎತ್ತರಿಸಲು ಬರ್ಮದ ಷಡಾಂಗ್ ತಂಡದ ಜನ ಹೆಸರಾದವರು. ಇದರಿಂದ ಎದೆಗೂಡಿನ ನಾಲ್ಕಾದರೂ ಬೆನ್ನು ಮೂಳೆಗಳು ಇದರೊಳಕ್ಕೆ ತೂರುತ್ತಿದ್ದುವು.

	19ನೆಯ ಶತಮಾನದ ಮೊದಲಿನ ತನಕ ಯೂರೋಪಿನ ಹೆಂಗಸರು ಗುತ್ತನಾಗಿ ಬಿಗಿಸುತ್ತಿದ್ದ ಒಳಕುಪ್ಪುಸದಿಂದ, ಶಾಶ್ವತವಾಗಿ, ಕೆಲವೇಳೆ ಹಾನಿಕರವಾಗಿ ಎದೆಗೂಡು ಸೊಟ್ಟಗಾಗಿ ಒಳಾಂಗಗಳಿಗೂ ಅಪಾಯವಾಗುತ್ತಿತ್ತು. ಮೊಲೆಗಳ ಆಕಾರ ಚೆಂದಗಾಣಿಸುವಂತೆ ಹಿಂದಿನ ಕಾಲದಲ್ಲಿ ಒತ್ತಿಡುತ್ತಿದ್ದರು ಇಲ್ಲವೇ ಉಬ್ಬಿಸುತ್ತಿದ್ದರು. ಚರಿತ್ರೆಯಲ್ಲಿ ಹೆಸರಾದ ಅಮೆeóÁನ್ ಸ್ತ್ರೀಯರು ಬಾಣಬಿಡಲು ಅಡ್ಡಬರುವುದೆಂದು ಬಲಗಡೆ ಮೊಲೆಯನ್ನು ತೆಗೆದುಹಾಕುತ್ತಿದ್ದರಂತೆ. ಕೆಲವು ಮತಾಚರಣೆಗಳಿಗಾಗಿ ರಷ್ಯದ ಒಂದು ಕ್ರೈಸ್ತ ಪಂಗಡದವರಲ್ಲಿ, ಹಿಂದಿನ ಕಾಲದಲ್ಲಿ ಮೊಲೆ ತೊಟ್ಟುಗಳನ್ನೋ ಮೊಲೆಗಳನ್ನೋ ತೆಗೆಸಿಕೊಳ್ಳುತ್ತಿದ್ದರು. ಹಮ್ಮುರಬಿಯ ಸೂತ್ರಗಳ ಪ್ರಕಾರ ದಂಡನೆಗಾಗಿ ಮೊಲೆಗಳನ್ನು ಕಿತ್ತುಹಾಕುತ್ತಿದ್ದರು.

	ಸುಂತಿ (ಸರ್ಕಂಸಿಷನ್) ಮಾಡುವುದು ಊನೈಕೆಯ ಪ್ರಸಿದ್ಧ ಉದಾಹರಣೆ. ಆಸ್ಟ್ರೇಲಿಯದ ಅನಾಗರಿಕರಲ್ಲಿ ಹರೆಯಕ್ಕೆ ಬಂದವನ ಬುಲ್ಲದ (ಶಿಶ್ನ) ತಳದಲ್ಲಿ ಉದ್ದಕ್ಕೂ ಹರಿದು ಮೂತ್ರನಾಳ ತೆರೆದಿಡುವುದು ಸಾಮಾನ್ಯ. ಅಮೆeóÁನ್, ಫಿಜಿ, ಜನರಲ್ಲಿ ಚಿಕಿತ್ಸೆಗಾಗಿ ಹೀಗೆ ಮಾಡುವುದುಂಟು. ಆಲ್ಜೀರಿಯ, ಈಜಿಪ್ಟ್, ಇಥಿಯೋಪಿಯಗಳ ಕೆಲವೆಡೆಗಳ ಕಾಡುಜನರು, ದಕ್ಷಿಣ ಆಫ್ರಿಕದ ಹಾಟೆಂಟಾಟರು. ಆಸ್ಟ್ರೇಲಿಯದ ಅನಾಗರಿಕರು ಒಂದು ಪಕ್ಕದ ತರುಡನ್ನು (ವೃಷಣ) ವಾಡಿಕೆಯಾಗಿ ತೆಗೆದುಹಾಕುತ್ತಾರೆ. ಮುಸ್ಲಿಮರ ರಾಣೀವಾಸದ ಪರಿಚಾರಿಕೆಯ ಗಂಡಸರ ಎರಡೂ ಕಡೆಯ ತರಡುಗಳನ್ನೂ ತೆಗೆಯುವುದು ವಾಡಿಕೆಯಲ್ಲಿತ್ತು. ಹಲವಾರು ಶತಮಾನಗಳತನಕ ರೋಮನ್ ಚರ್ಚುಗಳಲ್ಲಿನ ಸಣ್ಣಗಂಟಲಿನ ಗಂಡಸರು, ಹಲವಾರು ಪುರಾತನ ಭೂಮಧ್ಯ ಸಮುದ್ರದ ಕರಾವಳಿ ನಾಡುಗಳು, ಮೆಸೊಪೊಟೇಮಿಯ, ಚೀನಗಳಲ್ಲಿನ ಗುಲಾಮರು, ರಾಜಸೇವಕರು, ಪೂಜಾರಿಗಳಿಗೂ ಇದೇ ಗತಿಯಾಗುತ್ತಿತ್ತು. ಹಾದರದ ದಂಡನೆಯಾಗಿ ಕೂಡ ಮಧ್ಯ ಆಫ್ರಿಕ, ಬ್ಯಾಬಿಲೋನಿಯ, ಪುರಾತನ ಈಜಿಪ್ಟು, ಚೀನಗಳಲ್ಲಿ ತರಡುಗಳೆರಡನ್ನೂ ತೆಗೆದುಬಿಡುತ್ತಿದ್ದರು. ಸೆಲೆಬಸ್ ಬೋರ್ನಿಯೊ ದ್ವೀಪಗಳ ಕೆಲವು ಪಂಗಡಗಳ ಬಹುಮಂದಿ ಗಂಡಸರು ಅವರೊಡನೆ ಕೂಡುವವರಿಗೆ ಇನ್ನಷ್ಟು ಕಾಮ ಕೆರಳಿಸಲು, ಸುಮಾರು ಒಂದೂವರೆ ಅಂಗುಲಗಳ ಉದ್ದದ, ಕೊನೆಗಳು ಗುಬ್ಬಿಯಾಗಿರುವ, ತೆಳು ಕಂಬಿಯನ್ನು ತಮ್ಮ ಬುಲ್ಲದಲ್ಲಿ ತೂತುಮಾಡಿ ಸಿಕ್ಕಿಸಿಕೊಳ್ಳುತ್ತಿದ್ದರಂತೆ. ಸೆಲೆಬಸ್‍ನ ಆಲ್ಫೂರರು ಇದೇ ಕೆಲಸಕ್ಕಾಗಿ ಬುಲ್ಲದ ಮುಂಗೊನೆಯ ಚರ್ಮದಡಿ ಕಲ್ಲುಚೂರುಗಳನ್ನು ತೂರಿಸಿಡುತ್ತಿದ್ದರಂತೆ. ಆಫ್ರಿಕ, ಪುರಾತನ ಈಜಿಪ್ಟ್, ಭಾರತ, ಮಲೇಷ್ಯ, ಆಸ್ಟ್ರೇಲಿಯ, ರಷ್ಯಗಳ ಕೆಲವು ಪಂಗಡಗಳಲ್ಲಿ ಇಡೀ ಹೆಂಬುಲ್ಲವನ್ನೋ (ಕ್ಲೈಟೋರಿಸ್) ಒಂದು ಭಾಗವನ್ನೋ ಕೆಲವೇಳೆ ಯೋನಿದುಟಿಗಳನ್ನೋ (ಲೇಬಿಯ), ಗೊಟ್ಟಿಯನ್ನೋ (ಮ್ಯಾನ್ಸ್ ವೆನೆರಿಸ್) ಅವೆರಡನ್ನೋ ಕೊಯ್ದು ತೆಗೆಯುತ್ತಿದ್ದರು. ಅಲ್ಲದೆ, ಹೀಗೆ ಏನೂ ಕೊಯ್ದು ತೆಗೆದುಹಾಕದೆ, ಹೊರ ಜನಾಂಗಗಳನ್ನು ಸೀಳುವುದು ಮೆಕ್ಸಿಕೋ, ದಕ್ಷಿಣ ಅಮೆರಿಕಗಳ ಆದಿವಾಸಿಗಳಲ್ಲೂ ಮತ್ತೆ ಕೊಯ್ದು ಬಿಡಿಸುವ ತನಕ ಯಾರೊಂದಿಗೂ ಅಂಗಸಂಗ ಆಗದಿರುವಂತೆ ಯೋನಿ ಕಿರುದುಟಿಗಳ ನಡುವೆ ಸಣ್ಣ ತೂತು ಬಿಟ್ಟು ಕೊಯ್ದು ಅಂಟಿಸುವುದು ಪೂರ್ವ ಆಫ್ರಿಕ, ಕೆಲವರು ಯೋನಿಕಂಡಿಯನ್ನು ಕೊಯ್ದು ಹಿಗ್ಗಲಿಸುವುದೂ ಕೆಲವೆಡೆಗಳಲ್ಲಿ ಯೋನಿದುಟಿಗಳನ್ನು ಉದ್ದ ಸೀಳುವುದೂ ಹೀಗೆ ನೀಳವಾಗಿ ದೊಡ್ಡದಾಗಿ ಊದಿಕೊಂಡ ಯೋನಿದುಟಿಗಳಲ್ಲಿ ತೂತುಮಾಡಿ ದನಿಮಾಡುವ ವಸ್ತುಗಳನ್ನು ತಗುಲಿಹಾಕುವುದೂ ಕೃತಕವಾಗಿ ಯೋನಿಪೊರೆ (ಹೈಮನ್) ಹರಿದು ಹಾಕುವುದೂ ವಾಡಿಕೆಯಲ್ಲಿದ್ದವು.

	ಕೈಕಾಲುಗಳಿಗೆ ಬಿಗಿ ಪಟ್ಟಿಗಳನ್ನು ಸುತ್ತಿ ಕಿವುಚುವುದರಿಂದ ಉಳಿದ ಭಾಗಗಳೂ ಶಾಶ್ವತವಾಗಿ ಊದಿಕೊಳ್ಳುತ್ತವೆ. ಈ ಪದ್ಧತಿ ಪೂರ್ವ ಆಫ್ರಿಕದ, ದಕ್ಷಿಣ ಅಮೆರಿಕದ ಜನರಲ್ಲೂ ನೈಜೀರಿಯದಲ್ಲೂ ವಾಡಿಕೆಯಲ್ಲಿದೆ. ಈ ಶತಮಾನದ ಮೊದಲಿನ ತನಕ ಚೀನದ ಅನೇಕ ಹೆಂಗಸರು ತಮ್ಮ ಕಾಲುಗಳಿಗೆ ಬಿಗಿಯಾಗಿ ಪಟ್ಟಿಗಳನ್ನು ಸುತ್ತುತ್ತಿದ್ದರು. ಇದರಿಂದ ಕಾಲುಗಳು ಮೋಟಾಗಿ ಸಣ್ಣಗಾಗುತ್ತಿದ್ದವು. ಅಲಾಸ್ಕದವರೂ ಕೊಂಚಮಟ್ಟಿಗೆ ಹೀಗೇ ಮಾಡುತ್ತಿದ್ದರು. ಉತ್ತರ ಅಮೆರಿಕದ ಆದಿವಾಸಿಗಳು, ಆಸ್ಟ್ರೇಲಿಯದ ಅನಾಗರಿಕರು, ಕಾಡುಜನರು, ಹಾಟೆಂಟಾಟರು, ನಿಕೋಬರ್, ಫಿಜಿ, ನ್ಯೂಗಿನಿ ಜನರಲ್ಲೂ ಇಡೀ ಬೆರಳನ್ನೋ ಬೆರಳ ಭಾಗವನ್ನೋ ಬಲಿಯಾಗಿ ಇಲ್ಲವೇ ಅಳಲಿಗಾಗಿ ಕತ್ತರಿಸಿಕೊಳ್ಳುತ್ತಿದ್ದರು. 	  
 											 (ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ